			ನಾಗಾರ್ಜುನ 2	

	ಕ್ರಿ.ಪ್ರೂ. 15 - ಕ್ರಿ.ಶ. 75. ಮಾಧ್ಯಮಿಕ ಬೌದ್ಧಪಂಥದ ಪ್ರವರ್ತಕ. ವೇದಲಿಯೆಂಬ ಗ್ರಾಮದಲ್ಲಿ ಹುಟ್ಟಿದನೆಂದು ಪ್ರತೀತಿ. ಆ ಗ್ರಾಮ ವಿದರ್ಭಕ್ಕೆ ದಕ್ಷಿಣ ಭಾಗದಲ್ಲಿ ಈಗಿನ ಆಂಧ್ರಪ್ರದೇಶಕ್ಕೆ ಸೇರಿದ್ದೆಂದು ತಿಳಿದುಬರುತ್ತದೆ. ಅದು ವಿದರ್ಭವೆಂದೇ ಒಂದು ವಾದವಿದೆ. ಇವನು ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದನೆಂದೂ, ಬೌದ್ಧ ಭಿಕ್ಷುವಾಗುವ ಮುನ್ನ ಶ್ರೋತ್ರಿಯನಾಗಿದ್ದನೆಂದೂ ಉಲ್ಲೇಖವಿದೆ. ಇವನ ಗುರು ಯಾರೆಂಬುದು ನಿಶ್ಚಿತವಾಗಿಲ್ಲ. ಅಶ್ವಘೋಷನೆಂದೂ, ರಾಹುಲನೆಂದೂ, ಸರಹನೆಂದೂ ಹೇಳುತ್ತಾರೆ. ಸಿಂಹಭದ್ರನೆಂಬ ಭಿಕ್ಷುವಿನ ಬಳಿ ಸರ್ವಾಸ್ತಿವಾದಶಾಸ್ತ್ರಗಳನ್ನು ಅಭ್ಯಸಿಸಿ, ಪ್ರಜ್ಞಾಧರನೆಂಬ ಹೆಸರಿನಿಂದ ಶ್ರಾವಕನಾದ ಈತ ಬೌದ್ಧ ಸಂಘದಲ್ಲಿ ಹದಿಮೂರನೆಯ ಆಚಾರ್ಯನಾಗಿ ನಾಗಾರ್ಜುನನೆಂಬ ಹೆಸರಿನಿಂದ ಪ್ರಸಿದ್ಧನಾದ.

	ನಾಗಾರ್ಜುನ ಆಂಧ್ರ ಚಕ್ರವರ್ತಿಯಾದ ಶಾತವಾಹನನ ಸಮಸಾಮಯಿಕ. ಈ ಶಾತವಾಹನ (ಷತೋ-ಪೋಹಾನ್) ನಾಗಾರ್ಜುನನ ಶಿಷ್ಯನಾಗಿದ್ದನೆಂದು ಚೀನಿ ಯಾತ್ರಿಕ ಇತ್ಸಿಂಗ್ ಬರೆಯುತ್ತಾನೆ. ಈ ರಾಜ್ಯದಲ್ಲಿ ಧರ್ಮಬುದ್ದಿ ಮೂಡಿಸಲೆಂದೆ ನಾಗಾರ್ಜುನ ತನ್ನ ಸಹೃಲ್ಲೇಖವೆಂಬ ಕೃತಿಯನ್ನು ರಚಿಸಿದನೆಂದು ಪ್ರತೀತಿ. ಈ ಚಕ್ರವರ್ತಿ ದಕ್ಷಿಣ ಕೋಸಲದ ದಕ್ಷಿಣ ದಿಗ್ಭಾಗದಲ್ಲಿ ವಿಹಾರವೊಂದನ್ನು ನಿರ್ಮಿಸಿ, ಅದಕ್ಕೆ ಸ್ವಲ್ಪದೂರದಲ್ಲಿ ಭ್ರಮರಗಿರಿಯೆಂಬ ಬೆಟ್ಟದ ಮೇಲೆ ನಾಗಾರ್ಜುನನಿಗಾಗಿ ಮಹಾಚೈತ್ಯವೊಂದನ್ನು ಕಟ್ಟಿಸಿದ. ಇದನ್ನೇ ಶ್ರೀಪರ್ವತವೆನ್ನುತ್ತಿದ್ದರು. ಈಗ ಇದು ನಾಗಾರ್ಜುನಕೊಂಡವೆನಿಸಿಕೊಂಡಿದೆ. ಇಲ್ಲೇ ನಾಗಾರ್ಜುನ ಹಲವಾರು ವರ್ಷ ವಾಸವಾಗಿದ್ದು ಧರ್ಮ ಪ್ರಸಾರ ಮಾಡಿದ. ಈ ಸ್ಥಳ ಮೊದಲೆ ಬೌದ್ಧ ಕ್ಷೇತ್ರವಾಗಿತ್ತು. ಪೂರ್ವಶೈಲಿಯ ಮತ್ತು ಅಪರ ಶೈಲಿಯ ಚೈತ್ಯಗಳು ಇಲ್ಲಿಯೇ ಇದ್ದವು. ಪೂರ್ವಶೈಲೀಯರೇ ಅಂಧಕರೆನ್ನಿಸಿಕೊಂಡ ಮಹಾಸಾಂಘಿಕರು. ಇವರಿಂದಲೇ ಮಹಾಯಾನ ಪಂಥ ಮುಂದೆ ಬೆಳೆದದ್ದು.

	ನಾಗಾರ್ಜುನನಿದ್ದ ಬೆಟ್ಟದ ಬಳಿಯೇ ಇದ್ದ ಮಹಾವನವೆಂಬುದು ಮಂಜುಶ್ರೀ ಬೋಧಿಸತ್ವನ ನಾಡೆಂದು ಪ್ರತೀತಿ. ಈ ಮಂಜುಶ್ರೀ ವಿಜಯವಾಡದ ಬಳಿ ಇರುವ ಇಂದ್ರಕೀಲ ಪರ್ವತದವನೆಂದು ಚಂದ್ರಕೀರ್ತಿಯ (ನಾಗಾರ್ಜುನನ ಟೀಕಾಕಾರ) ಗ್ರಂಥದಿಂದ ತಿಳಿದು ಬರುತ್ತದೆ. ಅವನಿಗೆ ಕಾಣಿಸಿಕೊಂಡು ಅಕ್ಷಯಮತಿ ನಿರ್ದೇಶನ ಸೂತ್ರವನ್ನು ಬೋಧಿಸಿದನೆಂದೂ ಅದರ ಆಧಾರದ ಮೇಲೆ ನಾಗಾರ್ಜುನ ಮಾಧ್ಯಮಿಕ ಪಂಥವನ್ನು ಪರಿವರ್ತನೆ ಮಾಡಿದನೆಂದೂ ಹೇಳುತ್ತಾರೆ. ಕುಮಾರಜೀವ (ಬಸ್ತೋನ್) ನಾಗಾರ್ಜುನನ ಜೀವಿತತ್ತ್ವವನ್ನು ಬರೆದು ಅದರಲ್ಲಿ ಇನ್ನೊಂದು ಕಥೆಯನ್ನು ಹೀಗೆ ಹೇಳಿದ್ದಾನೆ. ಶ್ರೀಕಾಕುಳಂ ಜಿಲ್ಲೆಗೆ ಸೇರಿದ ಮಹಾನಾಗ ಒಮ್ಮೆ ನಾಗಾರ್ಜುನನನ್ನು ಬಂಧಿಸಿ ಸಮುದ್ರತಳಕ್ಕೆ ಕರೆದೊಯ್ದು ಅಲ್ಲಿ ಸಪ್ತಪಿಟಕವೆಂಬ ವಾಙ್ಮಯವನ್ನು ಅವನಿಗೆ ತೋರಿಸಿದನಂತೆ. ಮೂರು ತಿಂಗಳಲ್ಲಿ ನಾಗಾರ್ಜುನ ಅದನ್ನು ಸಂಪೂರ್ಣವಾಗಿ ಗ್ರಹಿಸಿ ಜಂಬೂದ್ವೀಪಕ್ಕೆ ಹಿಂದಿರುಗಿದ ಮಾಧ್ಯಮಿಕ ಸ್ತೋತ್ರವನ್ನು ರಚಿಸಿದನಂತೆ. ಈ ಕಾರಣಕ್ಕಾಗಿ ಈ ನಾಗನಿಂದ ಪ್ರಕಟವಾದ ಈ ಪಂಥಕ್ಕೆ ಉರಗಯಾನವೆಂದೂ ಕರೆಯುತ್ತಾರೆ. ಸಮುದ್ರದ ತಳವೆಂದರೆ ಉದ್ಯಾನವೆಂದು (ಒಡಿಯಾಣ) ಕೆಲವರ ಊಹೆ. ಟಿಬೆಟಿನ ಇತಿಹಾಸಕಾರನಾದ ಲಾಮಾ ತಾರನಾಥ ಕೃಷ್ಣಾಮಂಡಳದ ಶ್ರೀಕಾಕುಳಂನಲ್ಲಿರುತ್ತಿದ್ದ ನಾಗದೇವ ಭಟ್ಟಾರಕನೆಂಬ ಬ್ರಾಹ್ಮಣ ಭಿಕ್ಷುವಿನ ಬಳಿ ಪ್ರಜ್ಞಾಪಾರಮಿತ ಮತ್ತು ಶತಸಾಹಸ್ರಿಕ ಎಂಬ ಪ್ರಾಕೃತಭಾಷೆಯ ಗ್ರಂಥಗಳಿದ್ದುವೆಂದೂ ನಾಗಾರ್ಜುನ ಇವನ್ನು ಸಂಸ್ಕøತಕ್ಕೆ ಅನುವಾದ ಮಾಡಿದನೆಂದೂ ಬರೆಯುತ್ತಾನೆ. ಕುಮಾರಜೀವ ಹೇಳುವ ಮಹಾನಾಗನೂ ತಾರಾನಾಥ ಹೇಳುವ ನಾಗದೇವನೂ ಒಬ್ಬನೇ ಎಂದು ಹೇಳಬಹುದು.

	ಪ್ರಜ್ಞಾಪಾರಮಿತಶಾಸ್ತ್ರ ಪ್ರಾಚೀನವಾದುದೆಂದೂ ಅದನ್ನು ಸ್ವೀಕರಿಸಿ ಪ್ರಕಟಿಸಿದನೆಂದೂ ಸಂಪ್ರದಾಯದ ಶ್ರದ್ಧೆ. ಆದರೆ,  ಪ್ರಜ್ಞಾಪಾರಮಿತವನ್ನು ನಾಗಾರ್ಜುನನೇ ಬರೆದನೆಂದು ಹೇಳುವುದು ಸಮಂಜಸ. ಅವನ ಶತಸಾಹಸ್ರಿಕ-ಪ್ರಜ್ಞಾಪಾರಮಿಕ ಗ್ರಂಥಕ್ಕೆ ಮುಂಚೆ ಪ್ರಜ್ಞಾಪಾರಮಿತದ ಉಲ್ಲೇಖವೇ ಎಲ್ಲಿಯೂ ಬರುವುದಿಲ್ಲ. ಇದೊಂದೇ ಅಲ್ಲ. ಎಲ್ಲ ಮೂಲ ಮಹಾಯಾನಸೂತ್ರಗಳೂ ನಾಗಾರ್ಜುನ ಬರೆದುವೇ ಎಂದು ವಾದಿಸುವವರಿದ್ದಾರೆ. ಸದ್ಧರ್ಮಪುಂಡರೀಕಸೂತ್ರ ಮತ್ತು ಅವತಂಸಕಸೂತ್ರಗಳನ್ನೂ ನಾಗಾರ್ಜುನನೇ ರಚಿಸಿದನೆಂದೂ ಪ್ರತೀತಿ ಇದೆ. ಇವನ ಪ್ರಮುಖ ಗ್ರಂಥವೆಂದರೆ ಮಾಧ್ಯಮಿಕ ಕಾರಕೆ (ನೋಡಿ- ಮಾಧ್ಯಮಿಕ-ಪಂಥ). ಇಪ್ಪತ್ತೇಳು ಅಧ್ಯಾಯಗಳ ಈ ಗ್ರಂಥಕ್ಕೆ ವಿಗ್ರಹವ್ಯಾವರ್ತಿನಿಯೆಂಬ ಸ್ವೋಪಜ್ಞ ವೃತ್ತಿಯಿದೆ. ವಾತ್ಯ್ಸಾಯನ ಮೊದಲಾದವರು ಎತ್ತಿದ ಆಕ್ಷೇಪಗಳಿಗೆ ಸಮಾಧಾನರೂಪವಾಗಿ ಈ ಎಪ್ಪತ್ತೆರಡು ಕಾರಿಕೆಗಳ ವೃತ್ತಿ ರಚಿತವಾಯಿತು. ಇದು ಪ್ರಮುಖವಾಗಿ ತರ್ಕದ ಗ್ರಂಥ. ಮಾಧ್ಯಮಿಕ ಕಾರಿಕೆಗಳಲ್ಲಿ ನಿರೂಪಿಸಿದ ದಾರ್ಶನಿಕ ನಿಲವನ್ನೇ ನಾಗಾರ್ಜುನನ ಯುಕ್ತಿಷ್ಟಷ್ಠಿಕಾ ಮತ್ತು ಶೂನ್ಯತಾಸಪ್ತತಿ ಎಂಬ ಗ್ರಂಥಗಳು ವಿಸ್ತರಿಸುತ್ತವೆ. ಪ್ರತೀತ್ಯ ಸಮುತ್ಪಾದಹೃದಯ ಮತ್ತು ಮಹಾಯಾನ ವಿಂಶಕ ಎಂಬ ಗ್ರಂಥಗಳೂ ಇವನೇ ಬರೆದವು. ಇಷ್ಟಲ್ಲದೆ ಪ್ರಮಾಣವಿಹೇಟನ, ಅಕುತೋಭಯ, ಮಧ್ಯಾಂತಾಗಮಶಾಸ್ತ್ರ, ಮಹಾಪ್ರಜ್ಞಾಪಾರ ಮಿಕಶಾಸ್ತ್ರ, ದಶಭೂಮಿವಿಭಾಷಾಶಾಸ್ತ್ರ- ಇವನ್ನೂ ನಾಗಾರ್ಜುನನೇ ರಚಿಸಿದನೆಂದು ಪ್ರತೀತಿ.

	ನಾಗಾರ್ಜುನ ವೈದ್ಯದಲ್ಲಿಯೂ, ಜ್ಯೋತಿಷ್ಯದಲ್ಲಿಯೂ, ಖಗೋಳಶಾಸ್ತ್ರದಲ್ಲಿಯೂ ಪರಿಣತನಾಗಿದ್ದ. ಸುಶ್ರುತಸಂಹಿತೆಯನ್ನು ಸಂಸ್ಕರಿಸಿ ಅದಕ್ಕೊಂದು ಅನುಬಂಧವನ್ನು ಸೇರಿಸಿದನೆಂದು ಪ್ರತೀತಿಯಿದೆ. ಈತ ನಾಗರಾಜನಾದ ವಾಸುಕಿಯಿಂದ ಕಂಠಹಾರವನ್ನು ಪಡೆದುಕೊಂಡು ಅದರ ಪ್ರಭಾವದಿಂದ ಸರ್ಪಮಂತ್ರವನ್ನು ವಶಮಾಡಿಕೊಂಡಿದ್ದನಂತೆ. ಈ ವಿಚಾರವನ್ನು ಬಾಣಭಟ್ಟ ತನ್ನ ಹರ್ಷಚರಿತೆಯಲ್ಲಿ ಉಲ್ಲೇಖಿಸಿದ್ದಾನೆ. ಪ್ರಜ್ಞಾಪಾರಮಿತೆ ನಾಗಾರ್ಜುನನಿಗೆ ಕನಸಿನಲ್ಲಿ ಪ್ರತ್ಯಕ್ಷಳಾಗಿ ರಸಶಾಸ್ತ್ರದ ಮರ್ಮವನ್ನು ಬೋಧಿಸಿದಳಂತೆ. ಇದರಿಂದಾಗಿ ನಾಗಾರ್ಜುನ ನೀಚಲೋಹಗಳನ್ನು ಬಂಗಾರಮಾಡುವ ವಿದ್ಯೆಯಲ್ಲಿ ಕುಶಲನೆಂದು ಪ್ರಖ್ಯಾತನಾಗಿದ್ದ.

	ನಾಗಾರ್ಜುನನ ಪ್ರಭಾವ ಬಹುಕಾಲದವರೆಗೂ ಉಳಿಯಿತು. ಅವನ ನ್ಯಾಯ ಪದ್ಧತಿಯನ್ನು ಅನುಸರಿಸಿದ ಹಲವಾರು ದಾರ್ಶನಿಕರಲ್ಲಿ ಗೌಡಪಾದ, ಶಂಕರಾಚಾರ್ಯ, ಖಂಡನಖಂಡಖಾದ್ಯದ ಕರ್ತೃವಾದ ಶ್ರೀಹರ್ಷನೂ ಸೇರಿದ್ದಾರೆ. ಇಡೀ ನಾಡಿನಲ್ಲಿ ಇವನ ಕೀರ್ತಿ ಹರಡಿತ್ತು. ಕಲ್ಹಣ ತನ್ನ ರಾಜತರಂಗಿಣಿಯಲ್ಲಿ ಈತನನ್ನು ಬೋಧಿಸತ್ತ್ವನೆಂದೇ ವ್ಯವಹರಿಸಿ, ಕಾಶ್ಮೀರದಲ್ಲಿ ಹುಷ್ಕ, ಜುಷ್ಕ ಮತ್ತು ಕನಿಷ್ಕ ಈ ರಾಜರ ಕಾಲದಲ್ಲಿ ತುಂಬ ಕೀರ್ತಿಶಾಲಿಯಾಗಿದ್ದನೆಂದು ತಿಳಿಸಿದ್ದಾನೆ. ಮಹಾಯಾನದ ಸುಪ್ರಸಿದ್ಧ ದಾರ್ಶನಿಕವಾದ ಆರ್ಯದೇವ ಈತನ ಶಿಷ್ಯ. 							  
   (ಎಸ್.ಕೆ.ಆರ್.; ಬಿ.ಸಿ.ಪಿ; ಜೆ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ